Breaking News

83ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನ

Written by 
Published: 24 November 2017
31 times Last modified on Friday, 24 November 2017 10:47

ಕೆ.ಎನ್.ಪಿ.ವಾರ್ತೆ,ಮೈಸೂರು, ನ.24;

ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಇಂದಿನಿಂದ 26ರವರೆಗೆ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಇಂದು ಬೆಳಿಗ್ಗೆ ಮಹಾರಾಜ ಕಾಲೇಜು ಮೈದಾನದಲ್ಲಿ ಧ್ವಜಾರೋಹಣ ಕಾರ್ಯಕ್ರಮವು ಜರುಗಿತು. ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ರಾಷ್ಟ್ರಧ್ವಜಾರೋಹಣ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮನುಬಳಿಗಾರ್ ಪರಿಷತ್ತಿನ ಧ್ವಜಾರೋಹಣ ಹಾಗೂ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ವೈ.ಡಿ.ರಾಜಣ್ಣ ನಾಡಧ್ವಜಾರೋಹಣವನ್ನು ನೆರವೇರಿಸಿದರು. 

ಅರಮನೆ ಆವರಣದ ಕೋಟೆ ಆಂಜನೇಯ ಸ್ವಾಮಿ ಮುಂಭಾಗದಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಮೈಸೂರು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ನಯಿಮಾ ಸುಲ್ತಾನ್ ನಜೀರ್ ಅಹಮದ್ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಮೈಸೂರು ಜಿಲ್ಲಾಧಿಕಾರಿಗಳಾದ ರಂದೀಪ್ ಡಿ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಶಿವಶಂಖರ್, ಪೊಲೀಸ್ ಆಯುಕ್ತರಾದ ಸುಬಹ್ಮಣ್ಯೇಶ್ವರ ರಾವ್, ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚೆನ್ನಣ್ಣನವರ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಜಿ.ಜಗದೀಶ್  ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು.

ಮಹಾರಾಜ ಕಾಲೇಜು ಮೈದಾನದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಬೆಳಿಗ್ಗೆ 11ಗಂಟೆಗೆ ನೆರವೇರಬೇಕಿದ್ದ ಉದ್ಘಾಟನಾ ಕಾರ್ಯಕ್ರಮ ಒಂದೂವರೆ ಗಂಟೆಯ ವಿಳಂಬವಾದ ಕಾರಣ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರಾದರೂ, ಕಾರ್ಯಕ್ರಮ ಆರಂಭವಾಗುತ್ತಿದ್ದಂತೆಯೇ ಸಮಾಧಾನಚಿತ್ತರಾದರು.

ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ|| ಹೆಚ್.ಸಿ.ಮಹದೇವಪ್ಪ ಅವರು ಸ್ವಾಗತ ಭಾಷಣ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಮನು ಬಳಿಗಾರ್ ಆಶಯ ನುಡಿಯನ್ನಾಡಿದರು. ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಅವರು ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾಗಿ ಮಾತನಾಡಿದರು.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಅದ್ಧೂರಿಯಾಗಿ ನಿರ್ಮಿಸಿರುವ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾಮಂಟಪದ ರಾಷ್ಟ್ರಕವಿ ಕುವೆಂಪು ಪ್ರಧಾನ ವೇದಿಕೆಯಲ್ಲಿ ಸಮೇಳಾಧ್ಯಕ್ಷರ ಭಾಷಣ ಮಾಡಿದ ಪ್ರೊ. ಚಂಪಾ, ನಮ್ಮ ರಾಜ್ಯದ ಹಿತಾಸಕ್ತಿಗಳ ಸಂರಕ್ಷಣೆಯ ಹಿನ್ನಲೆಯಲ್ಲಿ ನಮ್ಮ ಆಯ್ಕೆ ಸ್ಪಷ್ಟವಾಗಿರಬೇಕು ಎಂದರು. ಸ್ವಾತಂತ್ರ ನಂತರದ ಐತಿಹಾಸಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಾವು ಈಗ ಕಾಣುತ್ತಿರುವುದು ದಕ್ಷಿಣ ಏಷ್ಯಾದಲ್ಲಿನ ಬಲಾಢ್ಯವಾದ ಭಾರತ ಉಪಖಂಡವನ್ನಲ್ಲ ಎಲ್ಲ ನೆಲೆಗಳಲ್ಲಿ ಛಿದ್ರವಾಗುತ್ತಿರುವ ಭಾರತವನ್ನು ನಾವೀಗ ನೋಡುತ್ತಿದ್ದೇವೆ ಎಂದು ಅವರು ವ್ಯಾಖ್ಯಾನಿಸಿದರು.

ಬಲಾಢ್ಯ ಕೇಂದ್ರ ಸರ್ಕಾರ ಎಂಬುದು ಈಗ ಹಳೆಯ ನೆನಪು. ಒಬ್ಬ ಜಯಲಲಿತಾ, ಒಬ್ಬ ಚಂದ್ರಬಾಬು ನಾಯ್ಡು, ಒಬ್ಬ ಮಮತಾ ತಮ್ಮ ಒಂದೇ ಒಂದು ಪತ್ರಿಕಾ ಹೇಳಿಕೆಯಿಂದ ಕೇಂದ್ರವನ್ನು ಗಡಗಡ ನಡುಗಿಸಬಹುದು. ಪ್ರಧಾನಿಗೆ ಒಂದೇ ಒಂದು ಚೀಟಿ ಬರೆದು ಕಳಿಸಿ ತಮ್ಮ ರಾಜ್ಯದ ಜನರ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಬಹುದು. ಕರ್ನಾಟಕದ ಇಪ್ಪತ್ತೆಂಟು ಸಂಸದರ ನಿಯೋಗ ಒಯ್ಡು ಏಕಕಂಠದಿಂದ ಬಾಯಿ ಬಾಯಿ ಬಡಕೊಂಡರೂ ಆಗದ ಕೆಲಸವನ್ನು ಈ ರಾಜ್ಯಗಳ ಒಂಟಿ ದನಿಗಳು ಸಾಧಿಸಬಲ್ಲವು ಎಂದು ಅವರು ಮಾರ್ಮಿಕವಾಗಿ ನುಡಿದರು.

ನಮ್ಮ ರಾಜ್ಯದ ಕತೆ ನಮಗೆ ಗೊತ್ತೇ ಇದೆ. ಇಲ್ಲಿ ಅಧಿಕಾರಕ್ಕೆ ಬರುವ ಪಕ್ಷಗಳು ರಾಷ್ಟ್ರೀಯ ಪಕ್ಷಗಳು,ಇವುಗಳ ಹೆಡ್‍ಆಫೀಸುಗಳೆಲ್ಲ ಇರುವುದು ದೇಶದ ರಾಜಧಾನಿಯಲ್ಲಿ. ಮುಖ್ಯಮಂತ್ರಿಗಳು ಆಯ್ಕೆಯಾಗುವುದು ಪಕ್ಷದ ಶಾಸಕರ ಮನಸ್ಸಿನ ಇಚ್ಛೆಯಿಂದಲ್ಲ; ಹೈಕಮಾಂಡಿನ ಮನಸುಖರಾಯರ ಲಹರಿಯಿಂದ. ಹೀಗೆ ಪಾರ್ಟಿಯಲ್ಲಿ ಕುಕ್ಕರಿಸಿದ ಮುಖ್ಯಮಂತ್ರಿ ಸದಾ ತನ್ನ ಅಧಿಕಾರ ಉಳಿಸಿಕೊಳ್ಳವುದನ್ನೇ ಧ್ಯಾನಿಸಬೇಕು. ತನ್ನ ಮಂತ್ರಿಮಂಡಲದ ಒಬ್ಬ ಸಣ್ಣ ಮಂತ್ರಿಯ ಖಾತೆ ಬದಲಾವಣೆಗೂ ಅವನು ವರಿಷ್ಠರ ಆದೇಶಕ್ಕಾಗಿ ದಿಲ್ಲಿ ಯಾತ್ರೆ ಕೈಗೊಳ್ಳಬೇಕು ಎಂದು ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ವ್ಯಾಖ್ಯಾನಿಸಿದರು.

ಇಂಥ ರಾಷ್ಟ್ರೀಯ ಪಕ್ಷಗಳ ವರಿಷ್ಠರಿಗಾದರೋ ಬೇರೆ ಬೇರೆ ರಾಜ್ಯಗಳಲ್ಲಿರುವ ತಮ್ಮ ಪಕ್ಷದ ಹಿತಾಸಕ್ತಿಗಳ ರಕ್ಷಣೆಯೇ ಮುಖ್ಯವಾಗಿರುತ್ತದೆ. ಒಟ್ಟಿನ ಪರಿಣಾಮವೆಂದರೆ ರಾಷ್ಟ್ರೀಯ ಪಕ್ಷಗಳಿಂದ ನಮ್ಮ ರಾಜಕ್ಕೆ ಯಾವ ಕಲ್ಯಾಣವೂ ಆಗಿಲ್ಲ. ಆಗುವಂತಿಲ್ಲ. ಭಾರತದ ಇಂದಿನ ಬದಲಾದ ಪರಿಸ್ಥಿತಿಯಲ್ಲಿ ಯಾವುದೇ ಒಂದು ರಾಷ್ಟ್ರೀಯ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಸುಸೂತ್ರವಾಗಿ ಐದು ವರ್ಷ ಸರಕಾರ ನಡೆಸುವಂತಿಲ್ಲ ಎಂದು ಅವರು ಹೇಳಿದರು.

ಅನೇಕ ಧರ್ಮ, ಜಾತಿ ಸಮುದಾಯ, ಸಂಸ್ಕೃತಿಗಳ ಒಕ್ಕೂಟ ನಮ್ಮ ಇಂಡಿಯಾ. ಇಲ್ಲಿ ಏಕಪಕ್ಷೀಯವಾದ ಅಧಿಕಾರ ನಡೆಯಲು ಸಾಧ್ಯವೇ ಇಲ್ಲ. ಈ ಮೂಲಕ ಫೆಡರಲ್ ಸ್ಪರೂಪದ ಅರಿವು ಈಗ ನಮಗಾಗುತ್ತಿದೆ. ಅದರಿಂದಲೇ ಕೇಂದ್ರ ಸರಕಾರಗಳು ಶಕ್ತಿ ಕಳಕೊಂಡು, ಪ್ರಾದೇಶಿಕ ಪಕ್ಷಗಳ ಸಹಕಾರಕ್ಕಾಗಿ ಹಾತೊರೆಯಬೇಕಾಗಿದೆ. ಈ ವಾಸ್ತವಕ್ಕೆ ಅನುಗುಣವಾಗಿಯೇ ನಮ್ಮ ರಾಜಕಾರಣದ ವಿನ್ಯಾಸ ಬದಲಾಗತೊಡಗಿದೆ ಎಂದು ಅವರು ವಿಶ್ಲೇಷಿಸಿದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770672
Today
Yesterday
This Week
Last Week
This Month
Last Month
All days
5844
14978
20822
3647859
196899
189062
3770672
Your IP: 54.221.76.68
2017-12-18 08:39