Breaking News

ವೈಚಾರಿಕ ಸಂಘರ್ಷಗಳು ನಡೆದರೆ ಮಾತ್ರ ಅಭಿವೃದ್ಧಿಯಾಗಲು ಸಾಧ್ಯ : ಮಾನ್ಪಡೆ

Written by 
Published: 26 September 2017
34 times Last modified on Tuesday, 26 September 2017 17:02

ವರದಿ : ಟಿ.ಗಣೇಶ್

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಸೆ.26;

ವೈಚಾರಿಕ ಸಂಘರ್ಷಗಳು ನಡೆದರೆ ಮಾತ್ರ ಅಭಿವೃದ್ಧಿಯಾಗಲು ಸಾಧ್ಯ ಎಂದು ಕಲಬುರ್ಗಿ ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷರಾದ ಮಾರುತಿ ಮಾನ್ಪಡೆ ಅಭಿಪ್ರಾಯಪಟ್ಟರು.

ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ಕೆ.ವಿ.ತಿರುಪಾಲಪ್ಪ ದತ್ತಿನಿಧಿಯಿಂದ ಭುವನವಿಜಯ ಸಭಾಂಗಣದಲ್ಲಿ ಇಂದು ಏರ್ಪಡಿಸಿದ್ದ ಹೈದ್ರಾಬಾದ್ ಕರ್ನಾಟಕದ ಅಭಿವೃದ್ಧಿ ರಾಜಕಾರಣ ಸಂವಾದ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆದು ಉದ್ಘಾಟಿಸಿ  ಮಾತನಾಡಿದ ಅವರು, ಈ ಭಾಗದಲ್ಲಿ ಅಭಿವೃದ್ಧಿ ಕೇವಲ 371 ಜೆ ಕಲಂನಿಂದ ಮಾತ್ರ ಆಗಲು ಸಾಧ್ಯವಿಲ್ಲ. ರಾಯಚೂರಿನಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕ 0.165 ಇದೆ. ಇಲ್ಲಿ 16,000 ಕಿ.ಮೀ. ಗೊಂದು ಹೈಸ್ಕೂಲ್‍ಗಳಿವೆ. ಮೈಸೂರು ಭಾಗದಲ್ಲಿ 4,000 ಚ.ಕಿ.ಮೀ. ಗೊಂದು ಶಾಲೆಗಳಿವೆ. ಇದನ್ನು ಎಲ್ಲರೂ ಗಮನಿಸಬೇಕಾಗಿದೆ.

ಶಾಲೆಗಳು ಇದ್ದರೆ ಮಕ್ಕಳು ದನ ಕಾಯಲು ಸಿಗುವುದಿಲ್ಲ. ಶಾಲೆಗಳಿದ್ದರೆ ಕೆಲವು ಕಡೆ ಶಿಕ್ಷಕರು ಇರುವುದಿಲ್ಲ. ಮಕ್ಕಳನ್ನು ಶಾಲೆ ಬಿಡಿಸುವುದನ್ನು ತಪ್ಪಿಸಬೇಕು. ಜೊತೆಗೆ ಮಕ್ಕಳು ಕುರಿಕಾಯಬಾರದು ಅಂದ್ರೆ ತಂದೆ ತಾಯಿಗಳ ಆದಾಯ ಹೆಚ್ಚಾಗಬೇಕು. ತಂದೆ ತಾಯಿಗಳಿಗೆ ಆದಾಯ ಹೆಚ್ಚಿಸಲಾಗದ ಅಭಿವೃದ್ಧಿ ಮಕ್ಕಳಿಗೆ ಶಿಕ್ಷಣ ಕೊಡುತ್ತದಾ? ಆದಾಯ ಹೆಚ್ಚಿಸದ ಅಭಿವೃದ್ದಿ ಅಭಿವೃದ್ಧಿಯೇ ಎಂದು ವಿಷಾದಿಸುತ್ತ ನಾವು ಅಭಿವೃದ್ಧಿ ಸಾಧಿಸಿದ್ದು ಯಾವ ದಿಕ್ಕಿನಲ್ಲಿ ಎಂದು ಮಾನ್ಪಡೆ ಪ್ರಶ್ನಿಸಿದರು. ಅಭಿವೃದ್ಧಿಗೆ ಅಡ್ಡಿಯಾಗಿರುವ ಮನೋಭಾವ ಬದಲಾಗದೆ, ವೈಚಾರಿಕ ಸಂಘರ್ಷವಿಲ್ಲದೆ ಹೇಗೆ ಅಭಿವೃದ್ಧಿಯಾಗಲು ಸಾಧ್ಯ ಎಂದರು.

ಇಂದು ಯಾವ ಮೌಲ್ಯಗಳು ನಮ್ಮನ್ನು ಆಳುತ್ತಿವೆ ಎನ್ನುತ್ತ, ಶೇ.90ರಷ್ಟು ಭೂಮಿ ಭೂ ಮಾಲೀಕರ ಕೈಲಿದೆ. ಚಳುವಳಿ ಕಟ್ಟುವವರಿಗೆ ಈ ಕಣ್ಣೋಟ ಇದ್ದಿದ್ದರೆ ಪ್ರಗತಿಗೆ ಅಡ್ಡಿಯಾದ, ಯಾವ ಶಕ್ತಿಗಳು ಇದ್ದವು ಎಂದು ಅರ್ಥವಾಗುತ್ತಿತ್ತು ಎಂದರು. ಅಭಿವೃದ್ಧಿಗೆ ಅಡ್ಡಿಪಡಿಸುವ ಮನೋಭಾವ ನಮ್ಮೊಳಗಡೆಯಿಂದ ಬಂದಿದೆ. ಅಭಿವೃದ್ಧಿ ಪರವಾಗಿ ನಿಜವಾಗಿ ಯಾರಿದ್ದಾರೆ, ಯಾರಿಲ್ಲ ಎಂದು ಯುವಜನತೆ ಚಿಂತಿಸಬೇಕಾಗಿದೆ. ಸರ್ಕಾರ ಅಭಿವೃದ್ಧಿಯಾಗಿದೆ ಎಂದು ವಾದ ಮಂಡಿಸುತ್ತಿದೆ. ಆದರೆ ರಾಯಚೂರಿನಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕ 0.165 ಇದೆ.

ಅಂಗನವಾಡಿಗಳಲ್ಲಿ ಸ್ವಚ್ಛತೆಯಿಲ್ಲ. ಫ್ಯಾನ್ ಇಲ್ಲ, ತರಕಾರಿ ಪೂರೈಕೆಗೆ ಹಣ ಇಲ್ಲ. ವಿದ್ಯುತ್ ಬಿಲ್‍ಗೆ ಹಣ ಇಲ್ಲ, ಹಾಗಾದರೆ ಹಣ ಎಲ್ಲಿ ಹೋಗುತ್ತಿದೆ ಎಂದು ಹೈದ್ರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿ ರಾಜಕಾರಣವನ್ನು ಎಳೆ ಎಳೆಯಾಗಿ ಮಾನ್ಪಡೆ ಅವರು ಬಿಚ್ಚಿಡುತ್ತ ಎಲ್ಲಿದ್ಯೋ ಸಂಗಣ್ಣ ಅಂದರೆ ಇಲ್ಲೇ ಇದ್ದೆ ಸಂಗಣ್ಣ ಎನ್ನುವಂತಾಗಿದೆ ನಮ್ಮ ಸ್ಥಿತಿ ಎಂದು ನೊಂದು ನುಡಿದರು. ನಿಜಾಮರ ಆಡಳಿತದಿಂದಾಗಿ ನಾವು ಹಿಂದುಳಿದಿದ್ದೇವೆ ಎಂದು ಪ್ರಭುತ್ವ ಹೇಳುತ್ತಿದೆ. ತಮ್ಮ ಆಳ್ವಿಕೆ ಎಂದು ಹೇಳುತ್ತಿಲ್ಲ. ನಮ್ಮ ದೇಶದ ಅಭಿವೃದ್ಧಿಯ ಹಣದಲ್ಲಿ ರಾಜಕಾರಣ ಹಂಚಿಹೋಗುತ್ತಿದೆ.

ಉದಾರೀಕರಣ, ಜಾಗತೀಕರಣಗಳು ನಮ್ಮ ಪ್ರದೇಶದಲ್ಲಿ ಹಣ ಹಾಕಲು ಬಿಡುವುದಿಲ್ಲ. ಬೆಂಗಳೂರು ವಿಶ್ವದ ಹಬ್ ಆಗಿ ಬೆಳೆಯುತ್ತಿದೆ. ಆದರೆ ಹೈದ್ರಾಬಾದ್ ಕರ್ನಾಟಕ ಪ್ರದೇಶಗಳು ಹಬ್ ಆಗುತ್ತಿಲ್ಲ ಎಂದು ವಿಷಾದದಿಂದ ನುಡಿದರು. ಇಂದಿನ ವಿಚಾರಸಂಕಿರಣದ ವಿಷಯವನ್ನು ವಿಶ್ವವಿದ್ಯಾಲಯದಿಂದ ಬೀದಿ ಬೀದಿಗಳಲ್ಲಿ ವಿದ್ಯಾರ್ಥಿಗಳು ಜನತೆಗೆ ತಲುಪಿಸಬೇಕು. ಚರ್ಚಿಸುವಂತಾಗಬೇಕು ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು.

ಸಂವಾದದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಡಿ.ಪಾಂಡುರಂಗಬಾಬು ಅವರು ಹೈದ್ರಾಬಾದ್ ಕರ್ನಾಟಕದ ಅಭಿವೃದ್ಧಿ ರಾಜಕಾರಣ ಕುರಿತು ಈ ಪರಿಕಲ್ಪನೆಗಳನ್ನು ನೋಡುವಾಗ ಕ್ರೋಢಿಕೃತ ಬಹುತ್ವ ಮತ್ತು ಸೂಕ್ಷ್ಮ ವಿಭಜನೆಗಳನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಈ ಪರಿಕಲ್ಪನೆಯನ್ನು ಮರು ಪರಿಶೀಲಿಸಿ, ಮರು ವ್ಯಾಖ್ಯಾನ ಮಾಡುವ ಸಂದರ್ಭದಲ್ಲಿ ನಾವಿದ್ದೇವೆ ಇದಕ್ಕೆ ಸಾಕ್ಷಿಯಾಗಿ ವಿದ್ಯಾರ್ಥಿಗಳಿದ್ದಾರೆ ಎಂದು ತಿಳಿಸಿದರು.

ಅಭಿವೃದ್ಧಿ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ಎಚ್.ಡಿ.ಪ್ರಶಾಂತ್ ಅವರು ಸ್ವಾಗತಿಸಿ, ವಿಭಾಗದ ಆರಂಭ, ಆಶಯ, ಬೆಳವಣಿಗೆ, ಉದ್ದೇಶ ತಿಳಿಸಿದರು. ವಿಭಾಗದ ಪ್ರಾಧ್ಯಾಪಕರಾದ ಡಾ. ಎ. ಶ್ರೀಧರ ಅವರು ಕೆ.ವಿ. ತಿರುಪಾಲಪ್ಪ ದತ್ತಿನಿಧಿಯ ಉದ್ದೇಶಗಳು, ಆಶಯಗಳನ್ನು ವಿವರಿಸಿದರು. ವಿಭಾಗದ ಪ್ರಾಧ್ಯಾಪಕಿಯಾದ ಡಾ.ಸಿದ್ದಗಂಗಮ್ಮ ವಂದಿಸಿದರು. ಡಾ.ಯರ್ರಿಸ್ವಾಮಿ ನಿರೂಪಿಸಿದರು. ಸಂಗೀತ ವಿದ್ಯಾರ್ಥಿಗಳು ಪ್ರಾರ್ಥಿಸಿದರು.

ನಂತರ ಕಲಬುರ್ಗಿಯ ಅಭಿವೃದ್ಧಿ ಪತ್ರಕರ್ತರಾದ ದೇವು ಪತ್ತಾರ್ ಹಾಗೂ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಡೀನರು ಹಾಗೂ ಪ್ರಾಧ್ಯಾಪಕರಾದ ಡಾ. ಶಿವಗಂಗಾ ರುಮ್ಮ ಅವರು ವಿಷಯ ಮಂಡಿಸಿದರು. ಸಂವಾದದಲ್ಲಿ ಡಾ.ಎಂ. ಚಂದ್ರಪೂಜಾರಿ, ಡೀನರಾದ ಡಾ.ಮೋಹನ ಕುಂಟಾರ್, ಡಾ.ಸಿ.ಟಿ. ಗುರುಪ್ರಸಾದ್ ಮೊದಲಾದವರು ಹಾಗೂ ಅಧಿಕಾರಿಗಳು, ವಿದ್ಯಾರ್ಥಿಗಳು ಭಾಗಿಯಾದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3273928
Today
Yesterday
This Week
Last Week
This Month
Last Month
All days
2449
6468
22771
3222209
98418
263209
3273928
Your IP: 54.158.55.5
2017-10-18 09:09